Mysore, August 24:- Karnataka Art Exhibition Authority-kannada

ಮೈಸೂರು,ಆ.24:- ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು ದಸರಾ ವಸ್ತು ಪ್ರದರ್ಶನ-2022

ದೊಡ್ಡಕೆರೆ ಮೈದಾನದ ಆವರಣದಲ್ಲಿ 26/9/2022ರಿಂದ 24/12/2022ರವರೆಗೆ ಒಟ್ಟು 90ದಿನಗಳ ಅವಧಿಗೆ ಪ್ರತಿವರ್ಷದಂತೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ತಿಳಿಸಿದರು. ಇಂದು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿ ವಸ್ತು ಪ್ರದರ್ಶನದಲ್ಲಿ ದಿ.ಪುನೀತ್ ರಾಜಕುಮಾರ್ ನೆನಪಿಗಾಗಿ ‘ಸ್ಯಾಂಡ್ ಮಯೂಸಿಯಂ’ ಮತ್ತು ‘ಯೋಗ 3ಡಿ ವಿಡಿಯೋ ಮ್ಯಾಪಿಂಗ್’ ನಿರ್ಮಿಸಲಾಗುತ್ತಿದೆ. ಇದಲ್ಲದೆ ದಸರಾ ಮಹೋತ್ಸವದ ಸಂದರ್ಭದಲ್ಲಿ ಮತ್ತು ವಿವಿಧ ದಸರಾ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಂದ ಉದ್ಘಾಟನೆ ಆಗಲಿರುವುದರಿಂದ ‘ಕಾವೇರಿ ಬಹು ಮಾಧ್ಯಮ ಗ್ಯಾಲರಿ’ ಯನ್ನು ಸಚಿವರು ಉದ್ಘಾಟಿಸಲಿದ್ದಾರೆ ಎಂದರು. ವಸ್ತು ಪ್ರದರ್ಶನದ ಮುಂಭಾಗದಲ್ಲಿ ಡಿಜಿಟಲ್ ಆಪ್ ನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ವಸ್ತು ಪ್ರದರ್ಶನದ ಸಂಪೂರ್ಣ ನಕ್ಷೆ ಹಾಗೂ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮವಹಿಸಲಾಗುವುದು. ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ಸಸಿಗಳನ್ನು ಹಾಗೂ ಕೃಷಿ ಪರಿಕರಗಳನ್ನು ವಸ್ತು ಪ್ರದರ್ಶನದ ಪ್ರಾಧಿಕಾರದ ಮಳಿಗೆಗಳಲ್ಲಿ ಸಬ್ಸಿಡಿ ದರದಲ್ಲಿ ಹಂಚುವ ವ್ಯವಸ್ಥೆಯನ್ನು ಮಾಡಲಾಗುವುದು. ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪ್ರಾಧಿಕಾರದ ವತಿಯಿಂದ ವ್ಯವಸ್ಥಿತವಾಗಿ ವಿತರಿಸಲು ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ. ವಸ್ತು ಪ್ರದರ್ಶನ ಆವರಣವನ್ನು ‘ಪ್ಲಾಸ್ಟಿಕ್ ಮುಕ್ತ ವಲಯ’ ಎಂದು ಘೋಷಿಸಿದ್ದು ಆರ್/ಒ ಪ್ಲಾಂಟ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ವಸ್ತು ಪ್ರದರ್ಶನದ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮವಹಿಸಲಾಗಿದೆ. ವಸ್ತು ಪ್ರದರ್ಶನದ ಆವರಣದಲ್ಲಿ ಮಾಹಿತಿ ಕೇಂದ್ರ, ಪೊಲೀಸ್ ಉಪಠಾಣೆ, ಅಗ್ನಿಶಾಮಕ ವಾಹನ ಹಾಗೂ ಪ್ರಥಮ ಚಿಕಿತ್ಸಾ ಘಟಕವನ್ನು ತೆರೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದರು. ಪ್ರಾಧಿಕಾರದ ವತಿಯಿಂದ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಇಲಾಖೆ, ನಿಗಮಮಂಡಳಿಗಳು, ಹಾಗೂ ಜಿಲ್ಲಾ ಪಂಚಾಯತ್ ಮಳಿಗೆಗಳು,ದಸರಾ ಆಚರಣೆಗೆ ಹತ್ತು ದಿನ ಮುಂಚಿತವಾಗಿ ಸರ್ವವಿಧದಲ್ಲೂ ಮಳಿಗೆಗಳು ಕಡ್ಡಾಯವಾಗಿ ಭಾಗವಹಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು, ಸಾಧನೆಗಳನ್ನು ನಾಡಿನ ಜನರಿಗೆ ಪ್ರಚುರಪಡಿಸುವ ಸಲುವಾಗಿ ಅಗತ್ಯ ಸಿದ್ಧತೆಗಳೊಂದಿಗೆ ಸಾರ್ವಜನಿಕರ ವೀಕ್ಷಣೆಗೆ ಮಳಿಗೆಗಳನ್ನು ತೆರೆದು ವಸ್ತುಪ್ರದರ್ಶನವನ್ನು ತೆರೆದು ಯಶಸ್ವಿಗೊಳಿಸಲು ಕೋರಿ ಮುಖ್ಯಕಾರ್ಯದರ್ಶಿಯವರಿಂದ ಹೊರಡಿಸಿರುವ ಸುತ್ತೋಲೆಯನ್ನು ಲಗತ್ತಿಸಿ ಈಗಾಗಲೇ ಪತ್ರ ರವಾನಿಸಲಾಗಿದೆ ಎಂದು ತಿಳಿಸಿದರು. ಗ್ಲೋಬಲ್ ಟೆಂಡರ್ ಗುತ್ತಿಗೆದಾರರಿಂದ ಎ ಮತ್ತು ಬಿ ಬ್ಲಾಕ್ ಮಳಿಗೆಗಳು, ಸಿ ಬ್ಲಾಕ್ ಮಳಿಗೆಗಳು ತಿಂಡಿ ತಿನಿಸುಗಳ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. 2022ರ ದಸರಾ ವಸ್ತು ಪ್ರದರ್ಶನದ ಅವಧಿಯಲ್ಲಿ ಈ ಬಾರಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಮಳಿಗೆಗಳು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಮತ್ತು ವಿಶೇಷ ಆಕರ್ಷಣೀಯ ಮಳಿಗೆಗಳಾಗಿರುತ್ತವೆ ಎಂದರು. ಮುಖ್ಯದ್ವಾರದ ಪ್ರವೇಶ ಶುಲ್ಕ ವಸೂಲಾತಿ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವುದು ಹಾಗೂ ತಿಂಡಿ ತಿನಿಸುಗಳ ಮಾರಾಟ ಮಳಿಗೆಗಳನ್ನು ನಿರ್ವಹಿಸುವುದು, ಮನೋರಂಜನಾ ಪಾರ್ಕ್ , ಸ್ಕೈಟ್ರ್ಯಾಕ್ ಮಾನೋ ರೈಲು, ದೋಣಿ ವಿಹಾರ ಮತ್ತು ಜಾಹೀರಾತು ಈವೆಂಟ್ಸ್ (ಹೋರ್ಡಿಂಗ್ಸ್, ಪೋಲ್ಯಾಡ್ಸ್, ಸೆಂಟರ್ ಮೀಡಿಯಾ ಮಾತ್ರ) ಹಾಗೂ ವ್ಯವಸ್ಥೆ ನಿರ್ವಹಣೆ ಹಾಗೂ ಶುಲ್ಕ ವಸೂಲಾತಿ ಹಕ್ಕನ್ನು ‘ಇ’ ಪ್ರಕ್ಯೂರ್ ಮೆಂಟ್ ಪೋರ್ಟಲ್ ಮುಖಾಂತರ ಪ್ರಾಧಿಕಾರದಿಂದ ಕನಿಷ್ಠ ಟೆಂಡರ್ ಮೊತ್ತ 8,07,73,001 ರೂ.ಗಳಿಗೆ ಟೆಂಡರ್ ಕರೆಯಲಾಗಿದೆ. 7/9/2022ರಂದು ತಾಂತ್ರಿಕ ಬಿಡ್ ಮತ್ತು 9/9/2022ರಂದು ಆರ್ಥಿಕ ಬಿಡ್ ನ್ನು ಟೆಮಡರ್ ಪರಿಶೀಲನಾ ಸಮಿತಿ ಸದಸ್ಯರುಗಳ ಹಾಗೂ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುವುದು ಎಂದರು. ಕಳೆದೆರಡು ವರ್ಷಗಳಿಂದ ದಸರಾ ವಸ್ತುಪ್ರದರ್ಶನ ನಡೆಯದೇ ಇರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆ ಇರುವುದರಿಂದ ಮೈಸೂರು ಜನತೆ ತಾವು ಇದುವರೆಗೂ ನೋಡಿರುವ ವಸ್ತುಪ್ರದರ್ಶನದಲ್ಲಿ ಏನಾದರೂ ಬದಲಾವಣೆ ತರಲು ಸಲಹೆಗಳಿದ್ದರೆ ಆ.30ರೊಳಗೆ ಕಛೇರಿಗೆ ಪತ್ರ ಮೂಲಕ ಅಥವಾ exibitionauthority@gmail.com ಮಿಂಚಂಚೆ ಮೂಲಕ ನೀಡಬಹುದು ಎಂದು ತಿಳಿಸಿದರು.