Mysuru Dasara

ದಸರಾ ಬಗ್ಗೆ

ನಾಡ ಹಬ್ಬ ಮೈಸೂರು ದಸರಾ

 

ಅಕ್ಟೋಬರ್ ೭ ರಿಂದ ೧೫ ರ ವರೆಗೆ ೨೦೨೧ನೇ ಸಾಲಿನ ವಿಶ್ವವಿಖ್ಯಾತಿ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಈ ವರ್ಷದ ದಸರಾ ಉತ್ಸವಕ್ಕೆ ಅಕ್ಟೋಬರ್ ೭ ರಂದು ಬೆಳಗ್ಗೆ ೮.೧೫ ರಿಂದ ೮.೪೫ ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡಿಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಚಾಲನೆ ನೀಡಲಿದ್ದಾರೆ. ದಸರೆಯ ಮುಖ್ಯ ಆಕರ್ಷಣೆ ಜಂಬೂ ಸವಾರಿ ಅಕ್ಟೋಬರ್ ೧೫ ರಂದು ಜರುಗಲಿದ್ದು, ಅಂದು ಸಂಜೆ ೪.೩೬ ರಿಂದ ೪.೪೪ರವರೆಗೆ ನಂದಿ ಧ್ವಜ ಪೂಜೆ ನೆರವೇರಲಿದೆ. ಬಳಿಕ ಸಂಜೆ ೫ ರಿಂದ ೫.೩೦ ರ ವರೆಗೆ ಜಂಬೂ ಸವಾರಿ ನಡೆಯಲಿದೆ. ಕೊರೊನಾ ಹಿನ್ನೆಲೆ ಕಳೆದ ವರ್ಷದಿಂದ ದಸರಾ ಮಹೋತ್ಸವ ಸರಳವಾಗಿ ಆಚರಿಸಲಾಗ್ತಿದ್ದು, ಈ ವರ್ಷವೂ ಜಂಬೂ ಸವಾರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲಾ ಅರಮನೆ ಆವರಣದಲ್ಲಿ ಆಚರಿಸಲಾಗುತ್ತಿದೆ.

 

         ನಾಡಹಬ್ಬ ದಸರಾ ಅಂದರೆ ಅಲ್ಲಿ ವೈಭವಕ್ಕೇನು ಕಮ್ಮಿ ಇಲ್ಲ. ಅದು ಸರಳವಾಗಿರಲೀ ಅಥವಾ ಅದ್ಧೂರಿಯಾಗಿರಲಿ ದಸರಾ ಅಂದರೆ ಇಡೀ ನಾಡಿಗೆ ಹರುಷ ತರುವ ಹಬ್ಬ. ೯ ದಿನಗಳ ಕಾಲ ನಡೆಯುವ ಈ ನವರಾತ್ರಿ ಉತ್ಸವದಲ್ಲಿ ಮೈಸೂರು ಸಿಂಗಾರಗೊಳ್ಳುವುದನ್ನು ನೋಡುವುದೇ ಕಣ್ಣುಗಳಿಗೆ ಸಂಭ್ರಮ. ಮನೆಮನೆಗಳಲ್ಲಿ ಬೊಂಬೆ ಕೂರಿಸುವುದು, ದುರ್ಗಾ ಪೂಜೆ, ಆಯುಧ ಪೂಜೆ, ಸರಸ್ವತಿ ಪೂಜೆಗಳನ್ನು ಕೈಗೊಳ್ಳುವುದು ಈ ಹಬ್ಬದ ವಿಶೇಷತೆ.

 

         ನಾಡಹಬ್ಬ ಮೈಸೂರು ದಸರಾ ಉತ್ಸವ ಕರ್ನಾಟಕ ಸರ್ಕಾರ ನಡೆಸುತ್ತಿರುವ ಅತಿ ದೊಡ್ಡ ಹಾಗೂ ಪ್ರಮುಖ ಉತ್ಸವವಾಗಿದೆ. ಈ ದಸರಾ ಮಹೋತ್ಸವಕ್ಕೆ ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಮೈಸೂರು ಅರಸರಾದ ಶ್ರೀ ರಾಜ ಒಡೆಯರ್ ಅವರು ಕ್ರಿ.. ೧೬೧೦ರಲ್ಲಿ ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭಿಸಿದರು. ಆದರೆ ಕ್ರಿ.ಶ ೧೩೩೬ರಲ್ಲಿಯೇ ವಿಜಯನಗರ ಸಾಮ್ರಾಜ್ಯದಲ್ಲಿ ನವರಾತ್ರಿ ಉತ್ಸವವನ್ನು ಆಚರಿಸಲಾಗುತ್ತಿತ್ತು ಎಂಬುದಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗರು ದಾಖಲಿಸಿದ ಮಾಹಿತಿಯಿಂದ ತಿಳಿಯುತ್ತದೆ. ದಸರಾ ಮಹೋತ್ಸವಕ್ಕೆ ವೈಭವದ ಇತಿಹಾಸ ಇರುವುದಂತು ಸತ್ಯ. ಈ ದಸರಾ ಉತ್ಸವ ಸಾಂಸ್ಕೃತಿಕ ಸಂಕೇತವಾಗಿ ಕಂಡು ಬರುತ್ತದೆ.

 

        ಈ ಬಾರಿ ಅಕ್ಟೋಬರ್ ೧೫ ರಂದು ವಿಜಯದಶಮಿ ಪ್ರಯುಕ್ತ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯೂ ಆನೆಯು ನಾಡದೇವಿ ತಾಯಿ ಚಾಮುಂಡಿಯ ಚಿನ್ನದ ಉತ್ಸವ ಮೂರ್ತಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಲಿದ್ದಾನೆ. ಇದಕ್ಕಾಗಿ ದಸರೆ ಆನೆಗಳಿಗೂ ತಾಲೀಮು ನೀಡಲಾಗ್ತಿದ್ದು, ಫಿರಂಗಿ ತಾಲೀಮು ಕೂಡ ಭರದಿಂದ ಸಾಗಿದೆ. ಕೊರೊನಾ ಕಾರಣದಿಂದ ದಸರಾ ವೀಕ್ಷಣೆಗೆ ಹೆಚ್ಚು ಜನರಿಗೆ ಪ್ರವೇಶಾವಕಾಶ ಇಲ್ಲ. ಹೀಗಾಗಿ ದಸರಾ ವೈಭವವನ್ನು ಜನರು ತಾವು ಇರುವಲ್ಲಿಯೇ ವೀಕ್ಷಿಸಲು ಅನುಕೂಲವಾಗುವಂತೆ ಎಲ್ಲಾ ಕಾರ್ಯಕ್ರಮಗಳನ್ನು ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ.

 

ಪ್ರಸ್ತುತ

ಗಜಪಡೆ: ಮೈಸೂರು ದಸರಾ-2021ರ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆ ಮರಳಿನ ಮೂಟೆ ಹೊತ್ತು ತಾಲೀಮು ನಡೆಸಿದವು.

ಗಜಪಯಣ: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಕೇಂದ್ರ ಬಿಂದುವಾದ ಗಜಪಯಣಕ್ಕೆ ಹುಣಸೂರು ತಾಲ್ಲೂಕಿನ ವೀರನ ಹೊಸಹಳ್ಳಿಯ ನಾಗರಹೊಳೆ ಗೇಟ್ ಬಳಿ ಸಾಂಪ್ರದಾಯಕವಾಗಿ ಚಾಲನೆ ನೀಡಲಾಯಿತು.