st somshekhar presidency-kannada

ಸಚಿವರಾದ ಎಸ್.ಟಿ.ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ದಸರಾ ಪೂರ್ವಭಾವಿ ಸಭೆ

ಮೈಸೂರು ಆಗಸ್ಟ್ 29, ಸೋಮವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಾಡಹಬ್ಬ ದಸರಾ ಮಹೋತ್ಸವ-2022ರ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ, ದಸರಾ ಕಾರ್ಯಕ್ರಮಗಳ ಆಯೋಜನೆ ಸಂಬಂಧ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು. ಹೊರರಾಜ್ಯಗಳಿಂದ ಆಗಮಿಸುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಹೆಸರನ್ನು ಸೇರ್ಪಡೆ ಮಾಡುವಂತೆ ಸೂಚಿಸಿದರು. ಮೈಸೂರಿಗೆ ಆಗಮಿಸುವ ಪ್ರವಾಸಿಗರು ಕೆಆರ್ ಎಸ್, ಶ್ರೀರಂಗಪಟ್ಟಣ ಸೇರಿದಂತೆ ಮಂಡ್ಯ ಜಿಲ್ಲೆಯ ನಾನಾ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವಾಗ ಮಂಡ್ಯ ಜಿಲ್ಲೆಯ ಹೆಸರು ಕೂಡ ಸೇರ್ಪಡೆ ಮಾಡಬೇಕು ಎಂದರು. ಇದೇ ಮೊದಲ ಬಾರಿಗೆ ಆರೋಗ್ಯ ಮತ್ತು ಕೈಗಾರಿಕಾ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯ ಮೇಳ ಹಾಗೂ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ವಸ್ತುಪ್ರದರ್ಶನ ಆಯೋಜಿಸಲು ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ನಾಲ್ಕು ದಿನ ಕೈಗಾರಿಕಾ ದಸರಾ ಆಚರಣೆಗೆ ಕೈಗಾರಿಕಾ ಸಂಘದವರು ಮನವಿ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ದಸರಾ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡುವ ಸಂಬಂಧ ಏಕೀಕೃತ ಟಿಕೆಟ್ ನೀಡುವ ಬಗ್ಗೆ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ತಿಳಿಸಿದರು. ಸಭೆಯಲ್ಲಿ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು, ಪೊಲೀಸ್ ಆಯುಕ್ತರಾದ ಚಂದ್ರಗುಪ್ತ, ಜಿಪಂ ಸಿಇಒ ಪೂರ್ಣಿಮಾ, ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಾರಂಭವಾಗಲಿದ್ದು, ಆಕರ್ಷಕ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳು ಮೈಸೂರು ಅಂಬಾವಿಲಾಸ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು, ಭಾರ ಹೊರುವ ತಾಲೀಮಿನಲ್ಲಿ ಪಾಲ್ಗೊಂಡಿವೆ. ಏತನ್ಮಧ್ಯೆ ಆನೆಗಳು , ಕುದುರೆಗಳ ಸಮ್ಮುಖದಲ್ಲಿ ಫಿರಂಗಿ ಸಿಡಿಸಿ ತಾಲೀಮು ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡುವ ಸಲುವಾಗಿ ಫಿರಂಗಿ ಗಾಡಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಅವರು ಪೂಜೆ ಸಲ್ಲಿಸಿದರು ದಸರಾ ಅಂಗವಾಗಿ ಕುಶಾಲ ತೋಪು ಸಿಡಿಸಲು ತಾಲೀಮು ನಡೆಸಲು ಫಿರಂಗಿಗಾಡಿಗಳಿಗೆ ಸಂಪ್ರದಾಯದಂತೆ ಅರಮನೆ ಆವರಣದಲ್ಲಿ ಇಂದು ಮಧ್ಯಾಹ್ನ ಸಚಿವ ಎಸ್.ಟಿ.ಸೋಮಶೇಖರ್ ಅವರು ಕುಂಬಳಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಗೀತಾ ಪ್ರಸನ್ನ ಎಂ.ಎಸ್ ಮತ್ತಿತರರು ಉಪಸ್ಥಿತರಿದ್ದರು. ಇದೀಗ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ತಾಲೀಮು ನಡೆಸಲು ಚಾಲನೆ ಲಭಿಸಿದಂತಾಗಿದೆ. 11ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಕೆಯಾಗಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ ಆನೆಗಳು, ಕುದುರೆಗಳ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ. ವಿಜಯದಶಮಿಯಂದು ಅರಮನೆ ಬಳಿ ಪೊಲೀಸರು 21ಬಾರಿ ಕುಶಾಲತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸುತ್ತಾರೆ. ಆ ಸದ್ದಿಗೆ ಆನೆಗಳು, ಕುದುರೆಗಳು ಬೆದರದೆ, ವಿಚಲಿತಗೊಳ್ಳದೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆರಂಭಕ್ಕೂ ಮುನ್ನ ಫಿರಂಗಿಗಳ ಮೂಲಕ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ.