ಪ್ರವಾಸಿಗರಿಗಾಗಿ ಕಾಂಬೋ ಟಿಕೇಟ್ ವ್ಯವಸ್ಥೆ ಜಾರಿ

ಪ್ರವಾಸಿಗರಿಗಾಗಿ ಕಾಂಬೋ ಟಿಕೇಟ್ ವ್ಯವಸ್ಥೆ ಜಾರಿ

ಮೈಸೂರು, ಸೆ.18.(ಕರ್ನಾಟಕ ವಾರ್ತೆ):- ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಏಕೀಕೃತ ಟಿಕೇಟ್ (ಕಾಂಬೋ ಟಿಕೇಟ್) ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಏಕೀಕೃತ ಟಿಕೇಟ್ ಪಡೆಯುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು 05 ಪ್ರವಾಸಿ ಸ್ಥಳಗಳಾದ ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆ.ಆರ್.ಎಸ್ ಬೃಂದಾವನಕ್ಕೆ ತೆರಳಬಹುದು. ಪ್ರವಾಸಿಗರು ಈ ಏಕೀಕೃತ ಟಿಕೇಟ್ ಪಡೆಯುವುದರಿಂದ ಈ 05 ಸ್ಥಳಗಳಲ್ಲಿ ಟಿಕೇಟ್ ಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ.

ಏಕೀಕೃತ ಟಿಕೇಟ್ (ಕಾಂಬೋ ಟಿಕೇಟ್) ವ್ಯವಸ್ಥೆಯು 2022ರ ಸೆಪ್ಟೆಂಬರ್ 20ರಂದು ಆರಂಭಗೊಂಡು 2022ರ ಅಕ್ಟೋಬರ್ 05ರ ವರೆಗೆ ಚಾಲ್ತಿಯಲ್ಲಿರುತ್ತದೆ. ಒಂದು ಟಿಕೇಟ್ ಬೆಲೆ 500 ರೂ.ಗಳಾಗಿದ್ದು, ಮಕ್ಕಳಿಗೆ ಟಿಕೇಟ್ ದರವನ್ನು 250 ರೂ.ಗಳಿಗೆ ನಿಗಧಿಪಡಿಸಲಾಗಿದೆ. ಇದರಿಂದ ಒಬ್ಬರಿಗೆ ಮಾತ್ರ ಪ್ರವಾಸಿತಾಣಕ್ಕೆ ಹೋಗಬಹುದು.

ಏಕೀಕೃತ ಟಿಕೇಟ್ ಅನ್ನು ಪ್ರವಾಸಿ ಇಲಾಖೆಯ ವತಿಯಿಂದ ಮಾರಟಮಾಡಲಾಗುತ್ತಿದ್ದು, ಕೆ.ಎಸ್.ಟಿ.ಡಿ.ಸಿ ಹೋಟೆಲ್ ಹಾಗೂ ಟ್ರಾವೆಲ್ಸ್ ವಿಭಾಗದಲ್ಲಿ, ಕೆ.ಎಸ್.ಆರ್.ಟಿ.ಸಿ ಸಬರ್ಬ್ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 02ಕಡೆ, ಚಾ.ಬೆಟ್ಟ, ಮೃಗಾಲಯ, ಕೆ.ಆರ್.ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್ ಗಳಲ್ಲಿ ಟಿಕೇಟ್ ಲಭ್ಯವಿರಲಿದ್ದು, ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.