Mysuru Dasara

Untitled

ಶ್ರೀ ಎಸ್.ಎಂ.ಕೃಷ್ಣ

ಐತಿಹಾಸಿಕ, ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2021ರ ಉದ್ಘಾಟನೆಯನ್ನು  ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರೂ ಆದ ಎಸ್.ಎಂ.ಕೃಷ್ಣ ಅವರು ಉದ್ಘಾಟಿಸುವರು.ಮುಖ್ಯಮಂತ್ರಿ ಸ್ಥಾನ ಸೇರಿದಂತೆ ಬೇರೆ ಬೇರೆ ಹುದ್ದೆಗಳಲ್ಲಿದ್ದಾಗ ಅವರು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ ಜನಪರ ಯೋಜನೆಗಳು ಹಾಗೂ ಹಲವಾರು ಕಾರ್ಯಕ್ರಮಗಳನ್ನು ನೀಡುವ ಮ‌ೂಲಕ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಸ್.ಸಿ. ಮಲ್ಲಯ್ಯ ಅವರ ಪುತ್ರರಾದ ಎಸ್.ಎಂ.ಕೃಷ್ಣ ಅವರು 1932ರ ಮೇ 1 ರಂದು ಜನಿಸಿದರು. ಬಿ.ಎ, ಬಿ.ಎಲ್, ಎಂ.ಸಿ.ಎಲ್ (ಟೆಕ್ಸಾಸ್) ಪದವೀಧರರಾಗಿದ್ದಾರೆ‌. 1964ರ ಏಪ್ರಿಲ್ 29 ರಂದು ಪ್ರೇಮ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಎಸ್.ಎಂ. ಕೃಷ್ಣ ಅವರು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಪೂರೈಸಿದ್ದಾರೆ. ಯುಎಸ್‌ಎ(ಅಮೇರಿಕಾ) ಡಲ್ಲಾಸ್-ಟೆಕ್ಸಾಸ್‌ನ ಸದರನ್ ಮೆಥಡಿಸ್ಟ್ ಯೂನಿವರ್ಸಿಟಿ ಹಾಗೂ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.  ಈ ಯುನಿವರ್ಸಿಟಿಯ ‘ಫುಲ್ ಬ್ರೈಟ್ ಸ್ಕಾಲರ್-ಗ್ರಾಜುಯೇಟ್ ಸ್ಟೂಡೆಂಟ್’ ಸ್ಕಾಲರ್‌ಗೆ ಅವರು ಭಾಜನರಾಗಿದ್ದಾರೆ.ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ 1962- 68 ರವರೆಗೆ ಅಂತಾರಾಷ್ಟ್ರೀಯ ಕಾನೂನು ಪ್ರಾಧ್ಯಾಪಕರಾಗಿ ಹಾಗೂ ವಕೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ.


ರಾಜಕೀಯ ಜೀವನ:
ಗ್ರಾಮೀಣ ಭಾಗದ ರೈತಾಪಿ ಕುಟುಂಬದಲ್ಲಿ ಜನಿಸಿದ ಎಸ್.ಎಂ.ಕೃಷ್ಣ ಅವರು, ರಾಜಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದ್ದಾರೆ. ಆರಂಭದಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಸದಸ್ಯರಾಗಿದ್ದರು. 1962-67 ರಲ್ಲಿ ವಿಧಾನಸಭಾ ಸದಸ್ಯರಾಗಿದ್ದರು. 1965 ರಲ್ಲಿ ಕಾಮನ್‌ವೆಲ್ತ್ ಒಕ್ಕೂಟದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗಿಯಾಗಿದ್ದರು.1968-70ರಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ, 1971-72ರಲ್ಲಿ ಇದೇ ಕ್ಷೇತ್ರದಿಂದಲೇ ಮರು ಆಯ್ಕೆಯಾದರು. 1972 ರಿಂದ 77 ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. 1980 ರಲ್ಲಿ ಲೋಕಸಭೆಗೆ ಆಯ್ಕೆಯಾದರು. 1982 ರಲ್ಲಿ ವಿಶ್ವಸಂಸ್ಥೆಯ ಭಾರತೀಯ ನಿಯೋಗದಲ್ಲಿದ್ದರು. 1983-84ರಲ್ಲಿ ಕೇಂದ್ರ ಉದ್ಯಮ ಖಾತೆ ರಾಜ್ಯ ಸಚಿವರಾಗಿ, 1984 ರಲ್ಲಿ ವಿತ್ತ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 1989 ರಿಂದ 1992 ರವರೆಗೆ ವಿಧಾನಸಭೆಯ ಸ್ಪೀಕರ್ ಆಗಿ, 1992 ರಿಂದ 1994 ರವರೆಗೆ ಕರ್ನಾಟಕದ ಉಪ – ಮುಖ್ಯಮಂತ್ರಿಯಾಗಿದ್ದ ಇವರು, 1996 ರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು.1999 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಾಂಚಜನ್ಯ ಮೊಳಗಿಸಿ, 1999ರ ಅ.11 ರಂದು ಕರ್ನಾಟಕದ 16 ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ 2004 ರ ಮೇ ವರೆಗೆ ಸೇವೆ ಸಲ್ಲಿಸಿದರು. 2004 ರಲ್ಲಿ ಮುಖ್ಯಮಂತ್ರಿ ಅವಧಿ ಮುಕ್ತಾಯವಾದ ನಂತರ ಮಹಾರಾಷ್ಟ್ರ ರಾಜ್ಯಪಾಲರಾಗಿ 2008 ರವರೆಗೆ ಸೇವೆ ಸಲ್ಲಿಸಿದರು. 2008-2014ರವರೆಗೆ ರಾಜ್ಯಸಭಾ ಸದಸ್ಯರಾಗಿ, 2009 ರಿಂದ 2012 ರವರೆಗೆ ವಿದೇಶಾಂಗ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.